ಜಯಚಂದ್ರ 2

ಸ್ಥೂಲವಾಗಿ ಇಂದಿನ ಉತ್ತರ ಪ್ರದೇಶದ ಭೂಭಾಗವನ್ನು ಆಳುತ್ತಿದ್ದ ಗಾಹದ್ವಾಲ ಎಂಬ ಮನೆತನಕ್ಕೆ ಸೇರಿದ ಒಬ್ಬ ದೊರೆ. 12ನೆಯ ಶತಮಾನದಲ್ಲಿ ಉತ್ತರಾರ್ಧದಲ್ಲಿ ಇದ್ದವ. ಜಯಚ್ಚಂದ್ರ ಎಂದೂ ಇವನಿಗೆ ಹೆಸರಿತ್ತು. ಇವನ ತಂದೆಯ ಹೆಸರು ವಿಜಯಚಂದ್ರ. 10ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಗಾಹದ್ವಾಲ ಮನೆತನದ ಅರಸರಿಗೆ ಈಗಿನ ಕನೋಜ್ ರಾಜಧಾನಿಯಾಗಿತ್ತು.

ಜಯಚಂದ್ರ 1170ರಲ್ಲಿ ಪಟ್ಟಕ್ಕೆ ಬಂದ. ಜಯಚಂದ್ರನಿಗೂ ನೆರೆಯ ರಾಜ್ಯವನ್ನಾಳುತ್ತಿದ್ದ ಚಾಹಮಾನ ಮನೆತನದ 3ನೆಯ ಪೃಥ್ವಿರಾಜನಿಗೂ ವೈಮನಸ್ಯವಿತ್ತೆಂದು ತಿಳಿದುಬರುತ್ತದೆ. ರಾಜಸ್ಥಾನದ ಚಾಂದ ಎಂಬುವನು ತನ್ನ ಪೃಥ್ವೀರಾಜ ರಾಸೋ ಎಂಬ ಕಾವ್ಯದಲ್ಲಿ ಇದನ್ನು ರಮ್ಯವಾಗಿ ಬಣ್ಣಿಸಿದ್ದಾನೆ. ಆತನ ಹೇಳಿಕೆಯಂತೆ, ಜಯಚಂದ್ರ ತನ್ನ ಮಗಳಾದ ಸಂಯೋಗಿತೆ ಅಥವಾ ಸಂಯುಕ್ತ ಎಂಬವಳ ಸ್ವಯಂವರವನ್ನೇರ್ಪಡಿಸಿ ಅದಕ್ಕೆ ಪೃಥ್ವಿರಾಜನನ್ನು ಬಿಟ್ಟು ಉಳಿದವರನ್ನೆಲ್ಲ ಆಹ್ವಾನಿಸಿದ. ಸಂಯುಕ್ತೆಯಲ್ಲಿ ಪ್ರಣಯಾಸಕ್ತನಾದ ಪೃಥ್ವೀರಾಜ ತನ್ನ ತೋಳಬಲದಿಂದ ರಾಜಕುಮಾರಿಯನ್ನು ಅಪಹರಿಸಿಕೊಂಡು ಹೋದ. ಪೃಥ್ವೀರಾಜ ರಾಸೋದಲ್ಲಿ ವರ್ಣಿಸಲಾಗಿರುವ ಈ ಘಟನೆಗೆ ಐತಿಹಾಸಿಕ ಆಧಾರಗಳಾವುವೂ ದೊರೆಯುವುದಿಲ್ಲ. ಜಯಚಂದ್ರ ಬಂಗಾಳದ ಲಕ್ಷ್ಮಣಸೇನನೊಡನೆಯೂ ಹೋರಾಡಿದ.

ಜಯಚಂದ್ರನ ಆಳ್ವಿಕೆಯ ಮೊದಲ ಭಾಗ ಸಾಮಾನ್ಯವಾಗಿ ಶಾಂತಿಯುತವಾಗಿತ್ತು. ಆದರೆ ಅದು ಘೋರ ವಿಪತ್ತಿನಲ್ಲಿ ಕೊನೆಗೊಂಡಿತು. ಮಹಮ್ಮದ್ ಘೋರಿ ದಿಲ್ಲಿಯನ್ನು ಗೆದ್ದು. ಚಾಹಮಾನರನ್ನು ಹತ್ತಿಕ್ಕಿ ಕನೌಜಿಗೆ ದಂಡೆತ್ತಿ ನಡೆದ. ವೈರದಿಂದಾಗಿ ಜಯಚಂದ್ರ ಚಾಹಮಾನ ಪೃಥ್ವೀರಾಜನಿಗೆ ಸಹಾಯ ಮಾಡದೆ ಹೋದ. ಕೊನೆಗೆ ವಿಪತ್ತು ಅವನ ಬಾಗಿಲಿಗೇ ಬಂತು. 1193ರಲ್ಲಿ ಘೋರಿ ಮತ್ತು ಜಯ ಚಂದ್ರರ ನಡುವೆ ಚಂದವಾರ ಎಂಬಲ್ಲಿ (ಆಗ್ರ-ಇಟಾವಗಳ ನಡುವೆ ಇರುವ ಈಗಿನ ಫಿರೋಜಾಬಾದ್) ಘೋರ ಯುದ್ಧ ನಡೆದು, ಜಯಚಂದ್ರ ಹತನಾದ, ಮುಸಲ್ಮಾನ ಸೈನಿಕರು ಅವನ ರಾಜ್ಯವನ್ನು ಲೂಟಿ ಮಾಡಿ. ಅದನ್ನು ವಶಪಡಿಸಿಕೊಂಡರು. ಜಯಚಂದ್ರನ ಮಗನಾದ ಹರಿಶ್ಚಂದ್ರ ಮುಸಲ್ಮಾನರಿಂದ ರಾಜ್ಯವನ್ನು ತಿರುಗಿ ಪಡೆಯುವುದರಲ್ಲಿ ಯಶಸ್ವಿಯಾದನಾದರೂ ಈ ಮನೆತನದ ಕೊನೆಯವನಾದ ಅಡಕ್ಕ ಮಲ್ಲನ ಕಾಲದಲ್ಲಿ ಅಲ್ಪಮಿಷ್ ಗಾಹದ್ವಾಲ ರಾಜ್ಯವನ್ನು ಪೂರ್ಣವಾಗಿ ವಶಪಡಿಸಿಕೊಂಡ.

ಜಯಚಂದ್ರ ಸಾಹಿತ್ಯಾಭಿಮಾನಿಯಾಗಿದ್ದ. ನೈಷಧೀಯ ಚರಿತ್ರೆ ಎಂಬ ಪ್ರಸಿದ್ಧ ಸಂಸ್ಕøತಕಾವ್ಯದ ಕರ್ತೃವಾದ ಶ್ರೀಹರ್ಷ ಇವನ ಆಸ್ಥಾನದಲ್ಲಿದ್ದನೆಂದು ಪ್ರತೀತಿಯಿದೆ. 							 (ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ